ವ್ಯಕ್ತಿಯ ಘ್ರಾಣಗ್ರಾಹಕ ಹಾಗೂ ರುಚಿಯ ಅರಿವಿನ ಸಾಮಥರ್ಯ್ಗಳ ಅಳವು. ಅಂಥ ಅಳತೆಯಿಂದ ವಿವಿಧ ವ್ಯಕ್ತಿಗಳಲ್ಲಿ ಘ್ರಾಣ ಹಾಗೂ ರುಚಿಗ್ರಾಹಕ ಸಾಮಥರ್ಯ್ಗಳಲ್ಲಿ ಇರುವ ವ್ಯತ್ಯಾಸ, ಅದೇ ವ್ಯಕ್ತಿಯಲ್ಲಿ ರೋಗ ಇಲ್ಲವೇ ಬೇರೆ ಕಾರಣಗಳಿಂದ ಇವುಗಳಲ್ಲಿ ಉಂಟಾಗಬಹುದಾದ ವ್ಯತ್ಯಾಸ ಮುಂತಾದವನ್ನು ತಿಳಿಯಬಹುದು.
ಘ್ರಾಣಮಾಪನಕ್ಕೆ ಬಳಸುವ ಸಲಕರಣೆಯ ಹೆಸರು ಜ್ವಾರ್ಡಿಮೇಕರನ ಘ್ರಾಣಮಾಪಕ (ಆಲ್ಫ್ಯಾಕ್ಟೊಮೀಟರ್). ಇಲ್ಲಿ ಅಂಶಾಂಕಿಸಿದ ಒಂದು ಗಾಜಿನ ಕೊಳವೆ ಉಂಟು. ಇದರ ವ್ಯಾಸ ಸುಮಾರು ನಾಲ್ಕು ಮಿಲಿಮೀಟರ್. ಈ ಕೊಳವೆಯ ಒಂದು ತುದಿಗೆ ಮೂಗಿನ ಹೊಳ್ಳೆಯೊಳಗೆ ಇಟ್ಟುಕೊಳ್ಳುವಂತ ಆಕೃತಿ ಇದೆ. ಇನ್ನೊಂದು ತುದಿಯನ್ನು ಇದಕ್ಕಿಂತ ಸ್ವಲ್ಪ ದೊಡ್ಡದಾದ ಕೊಳವೆಯೊಳಗೆ ತೂರಿಸಲಾಗಿದೆ. ದೊಡ್ಡ ಕೊಳವೆಯ ಒಳಮೈಗೆ ಸ್ಪಂಜಿನಂತಿರುವ ವಾಸನಾರಹಿತ ರಬ್ಬರ್ ಪದರವನ್ನು ಹೊದೆಸಲಾಗಿದೆ. ಒಳಕೊಳವೆಯನ್ನು ಹೊರಕೊಳವೆಯೊಳಗೆ ಹೆಚ್ಚಾಗಿ ಅಥವಾ ಕಡಿಮೆಯಾಗಿ ತೂರಿದರೆ ಅಂಶಾಂಕನ ತೋರಿಸಿದಷ್ಟು ಭಾಗ ರಬ್ಬರ್ ಸ್ಪಂಜು ಅನಾವೃತವಾಗಿರತ್ತದೆ. ಸ್ಪಂಜನ್ನು ವಾಸನಾಯುಕ್ತ ವಸ್ತುವಿನ ನಿರ್ದಿಷ್ಟ ಸಾರದ ದ್ರಾವಣದಲ್ಲಿ ತೋಯಿಸಿ, ಒಳ ಕೊಳವೆಯಿಂದ ವಾಯುವನ್ನು ಮೂಗಿನ ಹೊಳ್ಳೆಯೊಳಕ್ಕೆ ಎಳೆದುಕೊಂಡರೆ ಅನಾವೃತವಾಗಿರುವ ಭಾಗದಿಂದ ಮಾತ್ರ (ಅಂದರೆ ನಿರ್ದಿಷ್ಟ ಪ್ರಮಾಣದಲ್ಲಿ) ಕಂಪುವಸ್ತು ಬಾಷ್ಟಶೀಲವಾಗಿ ಮೂಗಿಗೆ ತಲುಪುತ್ತದೆ. ಈ ರೀತಿ ಒಂದು ಕಂಪು ಬೀರುವ ವಸ್ತುವನ್ನು ಬೇರೆ ಬೇರೆ ಪ್ರಮಾಣಗಳಲ್ಲಿ ಮೂಗಿನ ಒಳಹೊಗಿಸಿ ವ್ಯಕ್ತಿಯ ಘ್ರಾಣಗ್ರಾಹಕ ಸಾಮಥರ್ಯ್ವನ್ನು ಅಳೆಯಬಹುದು. ಯಾವ ವಸ್ತುವನ್ನು ಪ್ರಯೋಗಕ್ಕೆ ಉಪಯೋಗಿಸಿದೆ ಎಂಬುದು ವ್ಯಕ್ತಿಗೆ ತಿಳಿಯದಂತೆ ಒಂದು ಅಡ್ಡತಡಿಕೆಯನ್ನೂ ಈ ಸಲಕರಣೆಯಲ್ಲಿ ಅಳವಡಿಸಲಾಗಿದೆ. ವ್ಯಕ್ತಿಯ ಘ್ರಾಣಗ್ರಾಹಕ ಸಾಮಥರ್ಯ್ ಆತ ವಾಸನೆಯನ್ನು ಆಘ್ರಾಣಿಸುವ ರಭಸವನ್ನು ಅವಲಂಬಿಸಿದೆ. ಆದ್ದರಿಂದ ಮೇಲೆ ಹೇಳಿರುವ ರೀತಿಯ ಘ್ರಾಣಮಾಪನೆ ಸೂಕ್ಷ್ಮರೀತಿಯದೆಂದು ಒಪ್ಪಲಾಗಿಲ್ಲ. ಇದರ ಬದಲು ಬೇರೆ ಏರ್ಪಾಡಿನಿಂದ ಘ್ರಾಣಮಾಪನೆ ಮಾಡಲಾಗುತ್ತದೆ. ಈ ವಿಧಾನದಲ್ಲಿ ಪ್ರತಿಯೊಂದು ಕಂಪುಪರೀಕ್ಷೆಗೂ ಬೇರೆ ಕುಪ್ಪಿಯನ್ನೂ ಮೂಗಿನ ಹೊಳ್ಳೆಯೊಳಗೆ ಇಡುವ ನಾಸಿಕ ಭಾಗಗಳನ್ನೂ ಉಪಯೋಗಿಸಬೇಕು. ಮೊದಲು ನಾಸಿಕ ಭಾಗಗಳನ್ನು ವ್ಯಕ್ತಿ ಮೂಗಿನ ಹೊಳ್ಳೆಗಳೊಳಗೆ ಇರಿಸಿಕೊಳ್ಳಬೇಕು ಮತ್ತು ಬಾಯಲ್ಲಿ ಉಸಿರಾಡುತ್ತಿರಬೇಕು. ಸೂಚನೆ ಕೊಟ್ಟೊಡನೆ ಉಸಿರಾಡುವುದನ್ನು ನಿಲ್ಲಿಸಬೇಕು. ಪ್ರಯೋಗಕಾರ ಪಿಚಕಾರಿಯಿಂದ ನಿರ್ದಿಷ್ಟ ಪ್ರಮಾಣದಲ್ಲಿ ವಾಯುವನ್ನು ಕುಪ್ಪಿಯೊಳಕ್ಕೆ ನೂಕುತ್ತ ಅದೇ ವೇಳೆಯಲ್ಲಿ ಕೊಳವೆಯನ್ನು ಅದುಮಿ ಹಿಡಿದಿರುವ ಚಿಮುಟವನ್ನು ಸಡಿಲಿಸಬೇಕು. 

ಇದರಿಂದ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಮತ್ತು ಕ್ಲುಪ್ತರಭಸದಿಂದ ವಾಸನಾಯುಕ್ತ ವಸ್ತುವಿನ ಬಾಷ್ಪವನ್ನು ಮೂಗಿನ ಹೊಳ್ಳೆಗಳ ಒಳಹೊಗಿಸಲು ಸಾಧ್ಯ. ನಾಸಿಕಭಾಗಗಳನ್ನು ಹೊರತೆಗೆದು ಮೂಗಿನಿಂದ ಉಸಿರಾಡಲು ಪ್ರಾರಂಭಿಸಿದಾಗ ಅಷ್ಟು ಪ್ರಮಾಣದ ಕಂಪು ವಸ್ತು ಘ್ರಾಣಕ್ಷೇತ್ರವನ್ನು ತಲುಪತ್ತದೆ. ಹೀಗೆ ವ್ಯಕ್ತಿಯ ಘ್ರಾಣಗ್ರಾಹಕ ಸಾಮಥರ್ಯ್ವನ್ನು ಕಂಡುಹಿಡಿಯಬಹುದು.

ರುಚಿಗ್ರಾಹಕ ಸಾಮಥರ್ಯ್ವನ್ನು ಅಳೆಯಲು ವಿಶೇಷ ಸಲಕರಣೆಗಳು ಬೇಕಿಲ್ಲ. 3% ಸಕ್ಕರೆಯ ದ್ರಾವಣ, 1% ಕ್ವಿನೀನಿನ ದ್ರಾವಣ, 5% ಉಪ್ಪಿನ ದ್ರಾವಣ. ಶೇ. 0.1% ಸಲ್ಫ್ಯೂರಿಕ್ ಆಮ್ಲ ಮತ್ತು ಇವನ್ನು ನಾಲಗೆಯ ಮೇಲೆ ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಸೋಕಿಸಲು ಸಹಾಯಕವಾಗಿ ಕುಂಚ ಅಥವಾ ಶಾಯಿ ತುಂಬುವ ಕೊಳವೆಯಂತೆ ಮೂತಿ ಉಳ್ಳ ಒಂದು ಗಾಜಿನ ನಾಳ ಇದ್ದರೆ ಸಾಕು. ವ್ಯಕ್ತಿ ಕಣ್ಣು ಮುಚ್ಚಿಕೊಂಡು ನಾಲಗೆಯನ್ನು ಹೊರ ಚಾಚಿರಬೇಕು. ನಾಲಗೆಯನ್ನು ಜೊಲ್ಲಿನಿಂದ ತೋಯಿಸಿರಬಾರದು. ಅಲ್ಲದೆ ರುಚಿಯನ್ನು ಪತ್ತೆ ಮಾಡುವ ವೇಳೆಯಲ್ಲೂ ನಾಲಗೆಯನ್ನು ಹೊರಚಾಚಿಕೊಂಡೇ ಇರಬೇಕು. ನಾಲಗೆಯ ತುದಿಯ ಹಿಂಭಾಗ, ಎರಡು ಅಂಚುಗಳು ಮತ್ತು ಮೇಲ್ಮೈಗಳಲ್ಲಿ ಕೇವಲ ಸ್ಥಳೀಯವಾಗಿ ಮತ್ತು ಹರಡಿಕೊಳ್ಳದ ಪ್ರಮಾಣದಲ್ಲಿ ಈ ದ್ರಾವಣಗಳನ್ನು ಒಂದೊಂದಾಗಿ ಸೋಕಿಸಿ ವ್ಯಕ್ತಿಯ ರುಚಿಗ್ರಾಹಕ ಸಾಮಥರ್ಯ್ವನ್ನು ಅಳೆಯಬೇಕು. ಪ್ರತಿಯೊಂದು ಪ್ರಯೋಗಾನಂತರವೂ ಶುಚಿಯಾದ ನೀರಿನಲ್ಲಿ ಬಾಯಿ ಮುಕ್ಕಳಿಸಿ ಮುಂದಿನ ಪ್ರಯೋಗವನ್ನು ಪ್ರಾರಂಭಿಸಬೇಕು. ವ್ಯಕ್ತಿಯ ರುಚಿಗ್ರಾಹಕ ಸಾಮಥರ್ಯ್ದ ಸೂಕ್ಷ್ಮತೆಯನ್ನು ಪರೀಕ್ಷಿಸಬೇಕಾದರೆ ವಿವಿಧ ಸಾಂದ್ರತೆಯ ಉಪ್ಪು ನೀರನ್ನೂ ಆಮ್ಲ ದ್ರವಾಣವನ್ನೂ ಉಪಯೋಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಾವಿರದಲ್ಲಿ ಒಂದು ಭಾಗ, 800ರಲ್ಲಿ ಒಂದು ಭಾಗ, ಹೀಗೇ 600, 500, 400, 300ರಲ್ಲಿ ಒಂದು ಭಾಗ ಉಪ್ಪು ಇರುವ ದ್ರಾವಣವನ್ನೂ 7000ರಲ್ಲಿ ಒಂದುಭಾಗ, 6000, 5500, 5000, 4000, 3000 ದಲ್ಲಿ ಒಂದು ಭಾಗ ಅಸೆಟಿಕ್ ಆಮ್ಲವಿರುವ ದ್ರಾವಣವನ್ನೂ ಇಂಥ ಮಾಪನಗಳಿಗೆ ಉಪಯೋಗಿಸುತ್ತಾರೆ. ಈಚೆಗೆ ವಿದ್ಯುತ್ ವಿಧಾನಗಳಿಂದ ರುಚಿ ಮತ್ತು ಘ್ರಾಣಮಾಪನೆಗಳನ್ನು ಮಾಡಲಾಗುತ್ತಿದೆ. ಇವು ಬಹು ಸೂಕ್ಷ್ಮಮಾಪನ ವಿಧಾನಗಳಾಗಿದ್ದು ಸಂಶೋಧನೆಗೆ ಹೆಚ್ಚು ಸಹಾಯಕವಾಗಿವೆ.		      (ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ